ನಾಸಿರ್ - ಉದ್ - ದೀನ್ ಮಹಮೂದ್
ದೆಹಲಿಯ ಗುಲಾಮಿ ಸಂತತಿಯ ಸುಲ್ತಾನ. ಇವನ ಆಳ್ವಿಕೆಯ ಕಾಲ 1246-1266. ನಾಸಿರ್-ಉದ್-ದೀನ್ ಅಲ್ತತ್‍ಮಿಷನ ಮೊಮ್ಮಗನೆಂದು ಕೆಲವರೂ ಕಿರಿಯ ಮಗನೆಂದು ಇನ್ನು ಕೆಲವರೂ ಹೇಳಿದ್ದಾರೆ. ಇವನು ಅಲ್ತತ್‍ಮಿಷನ ಮಗನಾದ ನಾಸಿರ್-ಉದ್-ದೀನನ ಮಗನೆಂಬುದೂ ಅಲ್ತತ್‍ಮಿಷನ ಮಗ ನಾಸಿರ್-ಉದ್-ದೀನ್ 1229ರಲ್ಲಿ ನಿಧನನಾದನೆಂಬುದೂ ಮಹಮದ್ ಹಬೀಬ್ ಮತ್ತು ನಿಜಾóಮಿ ಇವರ ಅಭಿಪ್ರಾಯ. ನಾಸಿರ್-ಉದ್-ದಿನ್ ಮಹಮೂದ್ 1246ರಲ್ಲಿ ಸಿಂಹಾಸನವೇರಿದಾಗ ದೆಹಲಿಯ ರಾಜಕೀಯ ಸ್ಥಿತಿ ವಿಷಯವಾಗಿತ್ತು. ನಾಸಿರ್-ಉದ್-ದೀನ್ ಸಾಧು, ಧರ್ಮ ಪ್ರವೃತ್ತಿಯವನು, ರಾಜಕೀಯ ಮತ್ತು ಆಡಳಿತ ಕಾರ್ಯದಲ್ಲಿ ಹೆಚ್ಚು ಆಸಕ್ತನಾಗಿರಲಿಲ್ಲ ಎಂದು ಹೇಳಲಾಗಿದೆ. ಆದರೆ ಆ ಕಾಲದ ವಸ್ತುಸ್ಥಿತಿ ಇದನ್ನು ಸಮರ್ಥಿಸುವುದಿಲ್ಲವಾದ್ದರಿಂದ ಅನೇಕ ಇತಿಹಾಸಕಾರರು ಈ ಅಭಿಪ್ರಾಯವನ್ನು ಅಲ್ಲಗಳೆದಿದ್ದಾರೆ. ಅವನ ಕಾಲದ ರಾಜಕೀಯ ಘಟನೆಗಳನ್ನು ಗಮನಿಸಿದಾಗ ಅವನು ಸಾತ್ತ್ವಿಕನಾಗಿದ್ದುದಕ್ಕಿಂತ ಅಧಿಕವಾಗಿ ಅಸಮರ್ಥನೂ ಅಸಹಾಯಕನೂ ಆಗಿದ್ದನೆಂದು ಹೇಳಬಹುದಾಗಿದೆ.

ನಾಸಿರ್-ಉದ್-ದೀನ್ ಅಧಿಕಾರಕ್ಕೆ ಬಂದಾಗಿನಿಂದಲೂ ಆಂತರಿಕ ದಂಗೆಗಳು ಹೆಚ್ಚಿದ್ದವು. ತುರ್ಕಿಯ ಮಲ್ಲಿಕರಲ್ಲಿ ಪ್ರಮುಖನಾಗಿದ್ದ ಬಲ್ಬನ್ ಅವನ ಪ್ರಧಾನಿಯಾಗಿದ್ದ. ಬಲ್ಬನನ ದಕ್ಷ ದಂಡನಾಯಕತ್ವದಲ್ಲಿ ಖೋಕಾರರನ್ನು ಅಡಗಿಸಲಾಯಿತು. 1247-48ರಲ್ಲಿ ಕನೌಜ್, ಯಮುನಾ ಮತ್ತು ಕಾಲಿಂಜರ್ ಪ್ರದೇಶಗಳ ಹಿಂದೂ ರಾಜರ ಮೇಲೆ ದಂಡಯಾತ್ರೆ ನಡೆಸಿ ಸುಲ್ತಾನ ಅವರಿಂದ ಅಪಾರ ಐಶ್ವರ್ಯ ಪಡೆದನಾದರೂ ಅವರನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಲಾಗಲಿಲ್ಲ. ತರುವಾಯ ಸುಲ್ತಾನ ಆಗ ಪ್ರಬಲನಾಗುತ್ತಿದ್ದ ರಣತಂಬೊರ್ ರಾಜನ ಮೇಲೆ ದಂಡೆತ್ತಿ ಹೋದ. ದಂಡಯಾತ್ರೆ ಯಶಸ್ವಿಯಾಗಲಿಲ್ಲ.

1249ರಲ್ಲಿ ಪ್ರಧಾನಿ ಬಲ್ಬನ್ ತನ್ನ ಮಗಳನ್ನು ಸುಲ್ತಾನನಿಗೆ ಕೊಟ್ಟು ವಿವಾಹ ಮಾಡಿದ. ಬಲ್ಬನ್ ರಾಜಪ್ರತಿನಿಧಿಯ ಹುದ್ದೆ ಪಡೆದ. ಇದರಿಂದ ಬಲ್ಬನನಿಗೆ ಸೈನ್ಯ ಮತ್ತು ಆಡಳಿತದ ಸಂಪೂರ್ಣ ಹತೋಟಿ ಸಿಕ್ಕಿತು. ಅವನು 1251-52ರಲ್ಲಿ ಗ್ವಾಲಿಯರ್, ಚಂದೇರಿ, ನರ್ನೊಲ್ ಮತ್ತು ಮಾಳವಗಳ ಮೇಲೆ ದಂಡಯಾತ್ರೆ ನಡೆಸಿ ನರ್ನೊಲಿನ ಕೋಟೆಯನ್ನು ಹಾನಿಗೊಳಿಸಿ ರಾಜಧಾನಿಯನ್ನು ಲೂಟಿ ಮಾಡಿದ.

ಮಹತ್ತ್ವಾಕಾಂಕ್ಷಿಯಾಗಿದ್ದ ಬಲ್ಬನನನ್ನು ಅಧಿಕಾರದಿಂದ ಇಳಿಸಲು ಕೆಲವರು ಉದ್ಯುಕ್ತರಾದರು. ಸುಲ್ತಾನ ಅವನನ್ನು ಪ್ರಧಾನಮಂತ್ರಿ ಪದವಿಯಿಂದ ತೆಗೆದ. ರಿಹಾನನನ್ನು ಅವನ ಸ್ಥಾನದಲ್ಲಿ ಪ್ರಧಾನಮಂತ್ರಿಯಾಗಿ ನೇಮಿಸಿದ.

1253-54ರಲ್ಲಿ ರೋಹಿಲ್‍ಖಂಡದಲ್ಲಿ ಹಿಂದೂಗಳು ದಂಗೆ ಎದ್ದರು. ಅದನ್ನು ಅಡಗಿಸಲಾಯಿತು. ಸ್ವಲ್ಪಕಾಲದಲ್ಲಿ ರಿಹಾನ್‍ನ ಆಡಳಿತ ವೈಖರಿಯ ಬಗ್ಗೆಯೂ ಅನೇಕ ಆಸ್ಥಾನಿಕರು ಮತ್ತು ಪ್ರಾಂತ್ಯಾಧಿಕಾರಿಗಳು ಅಸಮಾಧಾನಗೊಂಡರು. ಈ ಸಂದರ್ಭವನ್ನು ಕಾಯುತ್ತಿದ್ದ ಬಲ್ಬನ್ 1254ರಲ್ಲಿ ಕೆಲವು ಪ್ರಾಂತ್ಯಾಧಿಕಾರಿಗಳ ಬೆಂಬಲದಿಂದ ದೆಹಲಿಯತ್ತ ಸೈನ್ಯದ ಸಮೇತ ಬಂದ. ಬಲ್ಬನನೊಡನೆ ಯುದ್ಧ ಹೂಡದೆ ಸುಲ್ತಾನ ಈ ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆಹರಿಸಿ ಅವನನ್ನು ಪುನಃ ಹಿಂದಿನ ಸ್ಥಾನದಲ್ಲಿ ನೇಮಿಸಿದ.

ಎರಡನೆಯ ಬಾರಿ ಪ್ರಧಾನಿಯಾದ ಬಲ್ಬನ್ ತುಂಬ ಬಲಿಷ್ಠನಾಗಿ ನಾಸಿರ್-ಉದ್-ದೀನನನ್ನು ಕೈಗೊಂಬೆಯಾಗಿ ಮಾಡಿಕೊಂಡ. ಬಲ್ಬನ್ ತನ್ನ ವಿರೋಧಿಗಳನ್ನು ಅಡಗಿಸುವಲ್ಲಿ ಮತ್ತು ಪ್ರಾಂತ್ಯಾಧಿಕಾರಿಗಳನ್ನು ಪದಚ್ಯುತಗೊಳಿಸುವಲ್ಲಿ ಉಗ್ರ ಕ್ರಮಗಳನ್ನು ಕೈಗೊಂಡಾಗಲೂ ಸುಲ್ತಾನ ಮೌನ ಸಮ್ಮತಿ ಸೂಚಿಸುವಂತಾಯಿತು. 1257-58ರಲ್ಲಿ ಪಂಜಾಬಿನವರೆಗೂ ಬಂದಿದ್ದ ಮಂಗೋಲರನ್ನು ಅವನು ಹಿಮ್ಮೆಟ್ಟಿಸಿದ. ಬಲ್ಬನ್ 1258ರಲ್ಲಿ ರಾಜಪುಟಾಣರ ಮೇಲೆ ದಂಡಯಾತ್ರೆ ನಡೆಸಿದ. ರಾಜಧಾನಿಯ ಸುತ್ತ ಪ್ರಬಲರಾಗಿದ್ದ ದರೋಡೆಕೋರರನ್ನು ಅತ್ಯುಗ್ರ ಕ್ರಮಗಳಿಂದ ಅಡಗಿಸಿದ. 1260ರಲ್ಲಿ ಮುಂಗೋಲರ ದೊರೆ ದೆಹಲಿ ಸುಲ್ತಾನನೊಂದಿಗೆ ಸ್ನೇಹ ಬೆಳೆಸಿ ಒಂದು ರಾಯಭಾರಿ ನಿಯೋಗವನ್ನು ಕಳುಹಿಸಿದ. ಇದರಿಂದ ಮಂಗೋಲರೊಂದಿಗಿನ ಸಂಬಂಧ ಸ್ವಲ್ಪಕಾಲ ಶಾಂತಿಯುತವಾಗಿತ್ತು. 1260ರಿಂದ 1266ರವರೆಗೆ ನಡೆದ ರಾಜಕೀಯ ಘಟನೆಗಳ ಬಗ್ಗೆ ಆ ಕಾಲದ ಆಕರಗಳಿಂದ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ. ನಾಸಿರ್-ಉದ್-ದೀನ್ 1266ರಲ್ಲಿ ನಿಧನನಾದ. ಸುಲ್ತಾನ ಸ್ವಾಭಾವಿಕವಾದ ಸಾವನ್ನಪ್ಪಿದನೆಂಬುದು ಅನೇಕ ಇತಿಹಾಸಕಾರರ ಅಭಿಪ್ರಾಯ. ಅವನು ಬಲ್ಬನನ ಸಂಚಿಗೆ ಬಲಿಯಾದನೆಂದು ಹೇಳುವುದಕ್ಕೂ ಕೆಲವು ಆಧಾರಗಳಿವೆ. ನಾಸಿರ್-ಉದ್-ದೀನನ ಅನಂತರ ಬಲ್ಬನ್ ಸಿಂಹಾಸನವನ್ನೇರಿದ.						 								      (ಡಿ.ಎಸ್.ಜೆ; ಎ.ಕೆಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ